ಕ್ಯಾರಾಜೀನೀನ್

ಕಾಂಡ್ರಸ್ ಕ್ರಿಸ್ಪಸ್ ಮತ್ತು ಜೈಗಾರ್ಟೈನ ಮ್ಯಾಮಿಲೋಸ ಎಂಬ ಎರಡು ಜಾತಿಯ ಸಮುದ್ರ ಕಳೆಗಳಿಂದ ಪಡೆಯಲಾಗುವ ಒಂದು ಕಲಿಲವಸ್ತು.  ಕೈಗಾರಿಕಾ ಪ್ರಾಮುಖ್ಯವಿರುವ ಈ ವಸ್ತುವಿನ ಬಳಕೆ ಬಹಳ ಹಿಂದಿನಿಂದಲೂ ಐರ್ಲೆಂಡ್, ನಾರ್ಮಂಡಿ ಮತ್ತು ಬ್ರಿಟನ್ ಮುಂತಾದ ಪ್ರದೇಶಗಳಲ್ಲಿತ್ತು.  ಮೇಲೆ ತಿಳಿಸಿದ ಸಮುದ್ರ ಕಳೆಗಳಿಗೆ ಕ್ಯಾರಾಜೀನ್, ಐರಿಷ್ ಮಾಸ್ ಎಂಬ ವಾಣಿಜ್ಯ ನಾಮಗಳನ್ನು ಕೊಡಲಾಗಿದ್ದು ಈಗಲೂ ಔಷಧಶಾಸ್ತ್ರದಲ್ಲಿ ಈ ಹೆಸರುಗಳನ್ನೇ ಬಳಸಲಾಗುತ್ತಿದೆ.

ಕ್ಯಾರಾಜೀನೀನ್ ವಾಸನೆಯಿಲ್ಲದ, ನಸು ಕೆಂಪುಬಣ್ಣದ ಪುಡಿ.  850 ಸೆಂ. ಉಷ್ಣತೆಯಲ್ಲಿ ಇದು ನೀರಿನಲ್ಲಿ ಸಂಪೂರ್ಣವಾಗಿ ವಿಲೀನವಾಗಿ ಅಂಟಾದ ಅರೆಪಾರಕ ಕಲಿಲ ದ್ರಾವಣವಾಗುತ್ತದೆ; ಜೈವಿಕ ದ್ರಾವಣಗಳಲ್ಲಿ ವಿಲೀನವಾಗುವುದಿಲ್ಲ.  ರಾಸಾಯನಿಕವಾಗಿ ಗ್ಯಾಲಕ್ಟೋಸ್, ಕೀಟೊಗ್ಲುಟಾನಿಕ್ ಆಮ್ಲ, ಕೆಲವು ಶರ್ಕರಗಳು ಮತ್ತು ಒಂದು ಸಲ್ಫೇಟ್ ಏಕಕ-ಇವು ಕೂಡಿಕೊಂಡು ರಚಿತವಾಗಿರುವಂಥ ಬೃಹದಣುವಿದು.

ಕ್ಯಾರಾಜೀನೀನನ್ನು ಪ್ರಮುಖವಾಗಿ ಮುಲಾಮುಗಳ ತಯಾರಿಕೆಯಲ್ಲಿ ಬಳಸುತ್ತಾರೆ.  ಇದನ್ನು ಗ್ಲಿಸರೀನ್ ಅಥವಾ ಪ್ರೊಪೈಲಿನ್ ಗ್ಲೈಕಾಲಿನಲ್ಲಿ ವಿಲೀನಾಗಿಸಿ, ಲಭಿಸುವ ದ್ರಾವಣವನ್ನು ರಕ್ಷಕವಿರುವ (ಪ್ರಿಸರ್ವೇಟಿವ್) ನೀರಿನೊಂದಿಗೆ ಮಿಶ್ರಮಾಡಿದಾಗ ಮುಲಾಮುಗಳಿಗೆ ಬೇಕಾಗುವ ಮೆದುಪಾಕ (ಜೆಲಿ) ಬರುತ್ತದೆ.  ಐಸ್‍ಕ್ರೀಮ್, ಹಾಲಿನ ಪುಡಿಂಗ್, ಷರಬತ್ ಮುಂತಾದುವುಗಳ ತಯಾರಿಕೆಯಲ್ಲೂ ಈ ಮೆದುಪಾಕದ ಬಳಕೆ ಇದೆ.  ಕ್ಯಾರಾಜೀನೀನ್ ಕೈಗಾರಿಕೆಯಲ್ಲೂ ಬಳಕೆಯಾಗುತ್ತದೆ.  ಇದನ್ನು 0.2-0.4% ಪ್ರಮಾಣದಲ್ಲಿ ಎಣ್ಣೆಯೊಂದಿಗೆ ಬೆರೆಸಿ ಎಮಲ್ಷನ್ ತಯಾರಿಸಬಹುದು.

ಕ್ಯಾರಾಜೀನೀನ್ ತಯಾರಿಸುವ ಕ್ರಮ ಬಹಳ ಸರಳ. ಐರಿಷ್ ಮಾಸ್ ಸಮುದ್ರಕಳೆಗಳನ್ನು ಸಂಗ್ರಹಿಸಿ, ಬಿಸಿಲಿನಲ್ಲಿ ಒಣಗಿಸಲಾಗುತ್ತದೆ.  ಅನಂತರ ಅವನ್ನು ಚೆನ್ನಾಗಿ ತೊಳೆದು ಬಿಸಿನೀರಿನಲ್ಲಿ ಮುಳುಗಿಸಲಾಗುತ್ತದೆ.  ಇದರಿಂದ ಮಿಶ್ರಣ ಮೆತ್ತಗಾಗಿ ಮೆತುಪಾಕ ದ್ರಾವಣದಂತಾಗುತ್ತದೆ. ಈ ದ್ರಾವಣವನ್ನು ಶುದ್ಧೀಕರಿಸಿ ಕ್ಯಾರಾಜೀನೀನನ್ನು ಬೇರ್ಪಡಿಸಲಾಗುತ್ತದೆ.    (ಎ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ